ಅಬನಾಸಿ	 	
	ಎಬಿನೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ವನ್ಯವೃಕ್ಷ. ಡೈಯೊಸ್ಪೆರಾಸ್ ಎಬಿನಮ್ ಇದರ ಸಸ್ಯವೈಜ್ಞಾನಿಕ ಹೆಸರು. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಎಬಿನಿ ಎಂಬ ಹೆಸರಿದೆ. ಕನ್ನಡದಲ್ಲಿ ಕರೇಮರ, ಮಲ್ಲೈ, ಕುಮಾರಿ, ಬಲೆಮರ ಎಂಬ ಹೆಸರುಗಳೂ ಇವೆ. ಮರದ ವ್ಯಾಪಾರಿಗಳು ಇದನ್ನು ಎಬನಿ ಮರವೆಂದೇ ಕರೆಯುತ್ತಾರೆ. ಮೈಸೂರಿನ ಅರಣ್ಯಗಳಲ್ಲಿ ಹೇರಳವಾಗಿ ಬೆಳೆಯುವ ಈ ವೃಕ್ಷ ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ್ ಸಂಸ್ಥಾನಗಳಲ್ಲಿ ಬೇಸಿಗೆಯಲ್ಲಿ ಎಲೆಗಳು ಉದುರುವ ಕಾಡುಗಳಲ್ಲೂ ಕಂಡುಬರುತ್ತದೆ. ಒಳ್ಳೆಯ ವಾತಾವರಣದಲ್ಲಿ 20 - 30 ಮೀ. ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು. 5 - 6 ಮೀ. ಗಳಷ್ಟು ಎತ್ತರದವರೆಗೆ ಸಾಮಾನ್ಯವಾಗಿ ಕವಲೊಡೆಯದೆ ಬೆಳೆಯುವ ಈ ಮರದ ಬುಡ ಒಮ್ಮೊಮ್ಮೆ 3 ಮೀ. ಗಳಷ್ಟು ದಪ್ಪ ಬೆಳೆದಿರುವುದುಂಟು. ಕಪ್ಪು ಮಿಶ್ರಿತ ಬೂದುಬಣ್ಣದ ಇದರ ತೊಗಟೆ ಆಗಾಗ ಸುಲಿದು ಉದುರುತ್ತಿರುತ್ತದೆ.

	ಅಂಡಾಕಾರದ ಎಲೆಗಳು ಸಾಮಾನ್ಯವಾಗಿ 15 ಸೆಂ.ಮೀ. ಉದ್ದ, 6 ಸೆಂ.ಮೀ. ಅಗಲ ಇರುತ್ತವೆ. ಮರದ ಹೂಗೊಂಚಲುಗಳ ಮೇಲೆಲ್ಲ ತುಪ್ಪಳವಿರುತ್ತದೆ. ಹೂಗಳು ಏಕಲಿಂಗಪುಷ್ಪಗಳಾಗಿವೆ. ಎಲ್ಲ ಹೂಗಳಿಗೂ ಪುಷ್ಪ ಪಾತ್ರೆ ಮತ್ತು ಪುಷ್ಪದಳಗಳು ಇರುತ್ತವೆ. ಗಂಡುಹೂವಿನಲ್ಲಿ ಅನೇಕ ಕೇಸರಗಳಿರುತ್ತವೆ.

	ಎಳೆಯದಿದ್ದಾಗ ಹಣ್ಣಿನ ಮೇಲೆಲ್ಲ ಮೃದು ತುಪ್ಪಳವಿದ್ದು, ಮಾಗಿದಂತೆ ಈ ತುಪ್ಪಳ ಉದುರಿಹೋಗುತ್ತದೆ. ಬೀಜಗಳು ಸ್ವಲ್ಪ ಚಪ್ಪಟೆಯಾಗಿವೆ. ಈ ಮರದ ಕಪ್ಪನೆಯ ಚೇಗುಭಾಗದಲ್ಲಿ ಅಲ್ಲಲ್ಲಿ ಕೆಂಪು ಇಲ್ಲವೆ ಕಂದು ಎಳೆಗಳಿದ್ದು ಬಹು ಸುಂದರವಾಗಿರುತ್ತದೆ. ಚೌಬೀನ್ ತೂಕವುಳ್ಳದ್ದು. ತೇಗದಮರಕ್ಕಿಂತ ಗಟ್ಟಿಯಾಗಿದ್ದರೂ ಕೀಟಗಳು ಕೊರೆಯುತ್ತವಾಗಿ ಇದರ ಬಾಳಿಕೆ ಕಡಿಮೆ.

	ಮರದ ಎಲೆಗಳನ್ನು ಬೀಡಿ ತಯಾರಿಕೆಯಲ್ಲಿ ಹೊಗೆಸೊಪ್ಪು ಸುತ್ತಲು ಬಳಸುವುದಿದೆ. ಹಣ್ಣುಗಳನ್ನು ಕೆಲವರು ತಿನ್ನುವುದುಂಟು. ಮರವನ್ನು ಊರುಗೋಲು, ಆಟದ ಸಾಮಾನುಗಳ ತಯಾರಿಕೆಗೆ ಉಪಯೋಗಿಸುವುದಿದೆ. ಅರೆ ಮಾಗಿದ ಹಣ್ಣುಗಳನ್ನೂ ತೊಗಟೆಯನ್ನೂ ಚರ್ಮ ಹದಮಾಡಲು ಉಪಯುಕ್ತ. ಒಣಗಿದ ಹೂಗಳು ಮೂತ್ರಪಿಂಡದ, ಚರ್ಮದ ಹಾಗೂ ರಕ್ತದ ಕಾಯಿಲೆಗಳಲ್ಲಿ ಉಪಯೋಗಿಸುತ್ತಾರೆ. ತೊಗಟೆಯ ಕಷಾಯವನ್ನು ಅಗ್ನಿಮಾಂದ್ಯಕ್ಕೂ ಭೇದಿನಿಲ್ಲಿಸಲೂ ಬಳಸಲಾಗುತ್ತದೆ. ಕಣ್ಣುನೋವಾದಾಗ ತೊಗಟೆಯ ರಸವನ್ನು ಕಣ್ಣುಗಳಿಗೆ ಬಿಡುವುದುಂಟು.				
(ಎಸ್.ಎನ್.ಆರ್.)
										(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ